الجمعة، 13 فبراير 2009

ಮಿತ್ರನಿಗೊಂದು ಪತ್ರ



ಮಿತ್ರನಿಗೊಂದು ಪತ್ರ ಬರೆ
ನೆನಪುಗಳೊಂದು ಚಿತ್ರ ಬರೆ
ಹಗಲಲ್ಲೂ ರಾತ್ರಿಯ ಕತ್ತಲಿದೆ
ಮೋಡಗಳದ್ದೇ ತಂತ್ರ ಬರೆ
ದೇಶದ ಮಡಿಲಲಿ ನೆತ್ತರು ಹರಿಯಿತು
ಮಾತೆಯ ಕೊಂದ ಸುಪುತ್ರ ಬರೆ
'ಸಂಪತ್ತೊಂದೇ ಜೀವನ ಲಕ್ಷ್ಯ'
ನವ ಯುಗದ ನವ ಮಂತ್ರ ಬರೆ
ಕಲುಷಿತ ಸ್ನೇಹ,ಬತ್ತಿದ ಪ್ರೀತಿ
ಮನುಷ್ಯ ಚಲಿಸುವ ಯಂತ್ರ ಬರೆ
ಶಿರಗಳು ಬಾಗಿವೆ ಸ್ರಷ್ಟಿಯ ಮುಂದೆ
ಇದು ಬುದ್ಧಿಗೆ ನಿಲುಕದ ಸೂತ್ರ ಬರೆ
ಲಕ್ಷ್ಮಣ ರೇಖೆಯ ದಾಟುವ ' ಸೀತೆ '
ರಾವಣ ಕಾಮದ ಕುತಂತ್ರ ಬರೆ
ಜ್ಞಾನವೇ ಆಳುವ ಕುರ್ಚಿಯ ಒಡೆಯ
ಅಜ್ಞಾನವು ರಾಜನ ಮಿತ್ರ ಬರೆ

الأربعاء، 11 فبراير 2009

?ಅವನು ಯಾರೆಂದು ನಿಮಗೆ ಗೊತ್ತೇ

ಕೋಪಗೊಂಡರೆ ಅವನ ಪ್ರತಾಪವನ್ನು ಎದುರಿಸುವ ಧೈರ್ಯ ಯಾರಿಗೂ ಇಲ್ಲ

ಆದರೆ ಅವನ ಲ್ಲಿ ಕೋಪಕ್ಕಿಂತ ಕರುಣೆಯೇ ಅಧಿಕ

ನಿದ್ರೆ ಬಿಡಿ ಅವನಿ ಗೆ ತೂಕಡಿಕೆಯೂ ಬಾಧಿಸುವುದಿಲ್ಲ

ಅವನಿದ್ದಾನೆ ಆದರೆ ಅವನು ಯಾರಿಂದಲೂ ಬಂದಿಲ್ಲ ಅರ್ಥಾತ್ ಅವನು ಯಾರ ಸಂತಾನವೂ ಅಲ್ಲ

ಎಲ್ಲರನ್ನೂ, ಎಲ್ಲವನ್ನೂ ಅವನೇ ಸ್ರಷ್ಟಿಸಿದ ಆದರೆ ಅವನಿಗಾರೂ ಸಂತಾನವಿಲ್ಲ

ಅವನೇ ಮೊದಲು ಅವನಿಗಿಂತ ಮೊದಲು ಯಾರೂ ಇಲ್ಲ

ಅವನೇ ಅಂತ್ಯ ಅವನಿಗೆ ಅಂತ್ಯವಿಲ್ಲ

ಅವನು ಯಾವುದಾದರೊಂದು ವಿಷಯದ ಸಂಕಲ್ಪ ಮಾಡಿದಾಗ ಅದಕ್ಕೆ "ಆಗಿ ಬಿಡು" ಎಂಬ ಅಪ್ಪಣೆ ಕೊಡುವುದೇ ತಡ, ಅದು ಆಗಿ ಬಿಡುತ್ತದೆ

ಭೂಮಿಯು ಗೋಳಾಕಾರದಲ್ಲಿದೆ ಆದರೂ ಅದನ್ನು ನಿಮ್ಮ ವಾಸಸ್ಥಳವನ್ನಾಗಿಸಿದವನು ಅವನೇ

ನೀವು ಭೂಮಿಯ ಮೇಲೆ ಓಡಾಡುತ್ತೀರಲ್ಲವೇ,ಅದರಲ್ಲಿ ರಸ್ತೆಗಳನ್ನು ಹಾಸಿದವನೂ ಅವನೇ

ಕಣ್ಣುಗಳನ್ನೊಮ್ಮೆತ್ತಿ ಮೇಲೆ ನೋಡಿ! ವಿಶಾಲ ಆಕಾಶ ಯಾವುದೇ ಆಧಾರ ಸ್ತಂಭಗಳಿಲ್ಲದೆ ನಿಂತಿಲ್ಲವೇ!!?

ಆ ಸಪ್ತ ಗಗನಗಳನ್ನು ಇನ್ನೊಮ್ಮೆ ನೋಡಿರಿ.....,

ನಿಮಗೆಲ್ಲಾದರೂ ನ್ಯೂನತೆಕಾಣಿಸುತ್ತಿದೆಯೇ

ಪುನಃ ಪುನಃ ದ್ರಷ್ಟಿ ಹಾಯಿಸಿರಿ,ನಿಮ್ಮ ದ್ರಷ್ಟಿಯು ಸೋತು ಹತಾಶವಾಗಿ ಮರಳಿ ಬರುವುದು

ಹೌದು ಅವುಗಳನ್ನು ನಿಮಗೆ ಮೇಲ್ಛಾವಣಿಯಾಗಿ ಮಾಡಿದವನೂ ಅವನೇ

ಸಾಸಿವೆ ಕಾಳಿನಷ್ಟಿರುವ ಒಂದು ವಸ್ತು ಅದು ಯಾವುದೇ ಬಂಡೆಯಲ್ಲಿ ಅಥವಾ ಆಕಾಶಗಳಲ್ಲಿ ಅಥವಾ ಭೂಮಿಯೊಳಗೆ ಎಲ್ಲಾದರೂ ಅಡಗಿರಲಿ ಅದನ್ನು ಹೊರ ತರುವಷ್ಟು ಅವನು ಸೂಕ್ಷ್ಮದರ್ಶಿಯೂ ವಿವರಪೂರ್ಣನೂ ಆಗಿರುತ್ತಾನೆ.

ಪ್ರತಿಯೊಂದು ವಸ್ತುವಿನಲ್ಲೂ ನೀವು ಜೋಡಿಗಳನ್ನು ನೋಡುತ್ತೀರಲ್ಲವೇ?.....ಈ ವಸ್ತುಗಳನ್ನು ಸೃಷ್ಟಿಸಿದವನೂ ಅವನೇ

ತಾಯಿಯ ಗರ್ಭವನ್ನು ಸೇರುವ ಒಂದು ಬಿಂದು ತುಚ್ಛ ದ್ರವ ಹೇಗೆ ಆಲಿಸುವ ವೀಕ್ಷಿಸುವ ಒಂದು ಸುಂದರ ಮನುಷ್ಯನ ರೂಪ ಪಡೆಯುತ್ತದೆ .ಈ ಕುರಿತು ನೀವೆಂದಾದರೂ ವಿವೇಚಿಸಿದ್ದೀರಾ.... ಇದು ಯಾರ ಕೆಲಸವಾಗಿರಬಹುದು ಮನುಷ್ಯನಿಗಂತೂ ಹೀಗೆ ಮಾಡಲು ಸಾಧ್ಯವೇ ಇಲ್ಲ ... ಇನ್ನು ಕಲ್ಲು,ಮಣ್ಣು,ಮರಗಳು ಹೀಗೆ ಮಾಡಿರಬಹುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ .ಇದು ಕೂಡ ಅವನ ಅಗೋಚರ ಕೈಗಳ ಕೈಚಳಕವೇ ಆಗಿರುತ್ತದೆ

ರೈತನು ಭೂಮಿಯನ್ನು ಹೂಳಿ ಬೀಜವನ್ನು ಬಿತ್ತುತ್ತಾನೆ .ನಂತರ ಆಕಾಂಕ್ಷೆಗಳನ್ನು ಹೊತ್ತ ಕಣ್ಣುಗಳಿಂದ ಆಗಸದತ್ತ ನೋಡುತ್ತಾನೆ .... ಇದಕ್ಕಿಂತ ಅಧಿಕ ಅವನಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ... ಆಗ"ಅವನು" ಆಕಾಶದಿಂದ ಸುಸಮ್ರದ್ಧ ನೀರನ್ನಿಳಿಸುತ್ತಾನೆ ತರುವಾಯ ಅದರಿಂದ ಉದ್ಯಾನಗಳನ್ನೂ ಕೊಯ್ಲಿನ ಧಾನ್ಯಗಳನ್ನೂ ಮತ್ತು ಎಲ್ಲ ವಿಧದ ನಯನ ಮನೋಹರ ಸಸ್ಯಗಳನ್ನು ಬೆಳೆಸುತ್ತಾನೆ

ನೀರಿನಿಂದ ನಿರ್ಜೀವ ಭೂಮಿಯಲ್ಲಿ ಜೀವಕಳೆಯನ್ನು ಮೂಡಿಸುವ ಅದ್ವಿತೀಯ ಮತ್ತು ಅತ್ಯದ್ಭುತ ಕಲೆಗಾರನವನು.

ಜೀವಿಗಳ ಆಹಾರದ ಹೊಣೆ ಹೊತ್ತವನಲ್ಲವೇ "ಅವನು" , ಆದ್ದರಿಂದಲೇ ಈ ಎಲ್ಲಾ ಏರ್ಪಾಡುಗಳು

ನೀವು ಒಲೆಗಳನ್ನು ಉರಿಸುತ್ತೀರಲ್ಲವೇ .....?

ಹಚ್ಚ ಹಸಿರಾದ ಮರಗಳಿಂದ ನಿಮಗಾಗಿ ಬೆಂಕಿಯನ್ನುಂಟು ಮಾಡಿದವರು ಯಾರು ....!!?

ಜೀವನ ಸಾಧನವಾದ ಈ ಬೆಂಕಿಯನ್ನು ನೀವೇನು ಸ್ವತಃ ಉಂಟು ಮಾಡಿದ್ದೀರಾ!?

ಇಲ್ಲ...!! ಇದೂ ಅವನ ಚಮತ್ಕಾರವೇ.

ಸಮ್ರದ್ಧಿದಾಯಕ ಹಾಲಿನ ಕುರಿತು ನೀವೆಂದಾದರೂ ಆಲೋಚಿಸಿದ್ದೀರಾ...?

"ಅವನು" ಹೇಳುತ್ತಾನೆ : "ನಿಶ್ಚಯವಾಗಿಯೂ ಜಾನುವಾರುಗಳಲ್ಲಿಯೂ ನಿಮಗೊಂದು ಪಾಠವಿದ್ದೇ ಇದೆ .ಅವುಗಳ ಸೆಗಣಿ ಮತ್ತು ರಕ್ತದ ಮಧ್ಯದಿಂದ ಕುಡಿಯುವವರಿಗೆ ಆಹ್ಲಾದಕರವಾದ ಶುದ್ಧ ಹಾಲನ್ನು ನಾವು ಕುಡಿಸುತ್ತೇವೆ " (ಪವಿತ್ರ ಕುರ್ಆನ್,೧೬:೬೬)

ನಿಮಗಾಗಿ ಮತ್ತು ನಿಮ್ಮ ಜೀವನಕ್ಕಾಗಿ ಇಷ್ಟೆಲ್ಲಾ ಅನುಗ್ರಹಗಳನ್ನು ನೀಡಿದ 'ಅವನನ್ನು' ನೀವೇಕೆ ಪರಿಚಯಿಸುತ್ತಿಲ್ಲ…?

ಅವನಾದರೂ ಹೀಗೆ ಪ್ರಶ್ನಿಸುತ್ತಿದ್ದಾನೆ , " ಓ ಮಾನವಾ! ಆ ನಿನ್ನ ಕರುಣಾಮಯಿ ಪ್ರಭುವಿನ ಬಗ್ಗೆ ನಿನ್ನನ್ನು ಮೊಸಕ್ಕೊಳಪಡಿಸಿದ ವಸ್ತು ಯಾವುದು?

ಅವನು ನಿನ್ನನ್ನು ಸ್ರಷ್ಟಿಸಿದನು,ನಿನ್ನನ್ನು ನಖ ಶಿಖಾಂತ ಸರಿಪಡಿಸಿದನು,ನಿನ್ನನ್ನು ಸಂತುಲಿತಗೊಳಿಸಿದನು,

ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿ ರಚಿಸಿದನು." (ಪವಿತ್ರ ಕುರ್ಆನ್,82 : 6-8 )

ಮನುಷ್ಯ ಶ್ರೇಷ್ಠ ಸ್ರಷ್ಟಿಯಲ್ಲವೇ , ಅವನ ಶಿರವೂ ಶ್ರೇಷ್ಟ

ಹಾಗಾದರೆ ಶ್ರೇಷ್ಠವಲ್ಲದವುಗಳ ಮುಂದೆ ಶಿರವ ಬಾಗುವುದಂತೂ ಹೇಗೆ?

ಕಲ್ಲು ,ಮಣ್ಣು ಮರ ಮುಂತಾದವುಗಳನ್ನು ಆರಾಧ್ಯ ವಸ್ತುಗಳನ್ನಾಗಿಸುವ ಔಚಿತ್ಯವಾದರೂ ಏನು?

السبت، 7 فبراير 2009

ಪವಾಡ

ಅವನು...
ಅವನಿಗೆ ವಂಶಪರಂಪರೆಯಿಲ್ಲ
ಪ್ರಸಿದ್ಧ ಮನೆತನವೂ ಅವನದ್ದಲ್ಲ
ಗೋತ್ರ,ಜನಾಂಗದ
ಶೀರ್ಷಿಕೆಯೂ ಅವನಿಗಿರಲಿಲ್ಲ
ಸಮಾಜದಲ್ಲಿ ಗುರುತಿಸಿಕೊಳ್ಳಲು
ಯಾವ ಕುಲನಾಮವೂ
ಅವನಿಗೆ ಲಭ್ಯವಿರಲಿಲ್ಲ
ಹೌದು ..
ಅವನೊಬ್ಬ ಅಜ್ಞಾತನಾಮಕ
ವೈಶಿಷ್ಟ್ಯರಹಿತ ಸಾಮಾನ್ಯ ವ್ಯಕ್ತಿ
ರಸ್ತೆ ಬದಿಯಲ್ಲಿ ಚಿಗುರಿದ ಹುಲ್ಲಿನಂತೆ
ಯಾವ ಬೆಲೆಯೂ ಅವನಿಗಿರಲಿಲ್ಲ
ಆದರೆ ಇಂದು....
ಎಲ್ಲರೂ ಆತನನ್ನು ಹೊಗಳುತ್ತಿದ್ದಾರೆ
ಅದೆಷ್ಟೋ ವಂಶಜರನ್ನವನು
ಮೆಟ್ಟಿ ನಿಂತಿದ್ದಾನೆ
ಅದೆಷ್ಟೋ ಕುಲಜರು ಅವನೆದುರು
ತಲೆ ತಗ್ಗಿಸಿ ನಿಂತಿದ್ದಾರೆ
ಎತ್ತರದಲ್ಲಿ ಎವರಸ್ಟ್ ಬೆಟ್ಟವನ್ನೂ
ಮೀರಿ ನಿಂತಿದ್ದಾನೆ
ಆಲದ ಮರದಂತೆ
ಬೆಳೆದು ನಿಂತಿದ್ದಾನೆ
ಜನ ಮನದಾಸನವನ್ನಲಂಕರಿಸಿದ್ದಾನೆ
ಸಮಾಜದ ಆಗಸದಲ್ಲಿ
ಸೂರ್ಯನಂತೆ ಪ್ರಜ್ವಲಿಸುತ್ತಿದ್ದಾನೆ
ಜನರೀಗ ಆತನ ಹೆಸರನ್ನು
ಗೌರವಾದರದಿಂದ ತೆಗೆಯುತ್ತಾರೆ
ಅವನ ಆತ್ಮಗಥೆಯ
ಗ್ರಂಥ ರಚಿಸುತ್ತಾರೆ


ವಜ್ರ ಮಣಿಗಳು



ದಿನವೊಂದರಲ್ಲಿ ಹಲವು ಬಾರಿ ಮುಖವನ್ನು ತೊಳೆದುಕೊಳ್ಳಲು ತೋರುವ ಉತ್ಸಾಹವನ್ನು ವರ್ಷಕ್ಕೊಮ್ಮೆಯಾದರೂ ಮನ ತೊಳೆದುಕೊಳ್ಳಲು ತೋರಬೇಡವೇ?!
ಒಬ್ಬ ವ್ಯಕ್ತಿಯ ಯತಾರ್ಥ ಗೌರವ ಅವನೆಷ್ಟು ಉನ್ನತಿ ಗೇರಿದ್ದಾನೆಂಬುದರಲ್ಲಿಲ್ಲ ಬದಲಾಗಿ ಆ ಉನ್ನತಿಗೇರಲು ತುಳಿದ ಹಾದಿಯಿಂದ ಬರುತ್ತದೆ.
ಮೌನವಾಗಿರು ಜನರ ಪ್ರೀತಿಗೆ ಪಾತ್ರನಾಗುವೆ. ಮ್ರದುವಾಗಿರು ಜನರ ಗೌರವಕ್ಕೆ ಪಾತ್ರನಾಗುವೆ.
ತನ್ನನ್ನು ಯಾರೊಂದಿಗೂ ಹೋಲಿಸ ಬೇಡ . ಅದು ನಿನ್ನನ್ನು ನೀನೇ ಹೀಯಾಳಿಸಿದಂತೆ.
ಇತರರನ್ನು ದೂರಬೇಡ ಸಾಧ್ಯವಾದರೆ ತನ್ನನ್ನು ತಾನೇ ಬದಲಾಯಿಸಿಕೊಳ್ಳು ಏಕೆಂದರೆ ಭೂಮಿಗೆ ಹೊದಿಕೆ ಹಾಸುವುದಕ್ಕಿಂತ ಮೆಟ್ಟು ಧರಿಸಿ ಕಾಲನ್ನು ರಕ್ಷಿಸಿಕೊಳ್ಳುವುದೇ ಲೇಸು.
ಆರಂಭವು ಕೆಟ್ಟದಾಗಿತ್ತೆಂದು ಹಿಂದೆ ಹೋಗಿ ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಆದರೆ ತತ್ ಕ್ಷಣ ಕ್ರಿಯಾಶೀಲನಾಗಿ ಒಳ್ಳೆಯ ಅಂತ್ಯವನ್ನು ಕಾಣಲು ಎಲ್ಲರಿಂದಲೂ ಸಾಧ್ಯ.
ಇತರರ ತಪ್ಪುಗಳೆಡೆಗೆ ಬೆರಳು ತೋರಿಸುವುದು ಸುಲಭದ ಕೆಲಸ ಆದರೆ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವುದೇ ಕಷ್ಟ ಬಗೆಹರಿಸಲು ಸಾಧ್ಯವಿರುವ ಸಮಸ್ಯೆಯ ಕುರಿತು ಬೇಸರ ಪಡುವ ಅಗತ್ಯವಿಲ್ಲ.
ಬಗೆಹರಿಸಲಸಾಧ್ಯವಾದ ಸಮಸ್ಯೆಯ ಕುರಿತು ಬೇಸರ ಪಟ್ಟು ಲಭಿಸುವುದಾದರೂ ಏನು? ಸೋಲನ್ನು ಧೈರ್ಯದಿಂದ ಎದುರಿಸು ಮತ್ತು ಗೆದ್ದೂ ಶಾಂತವಾಗಿರು.
ಕೈ ಇಲ್ಲದ ಕೀಲಿಯನ್ನು ಯಾವೊಬ್ಬನೂ ತಯಾರಿಸುವುದಿಲ್ಲ ಅಂದ ಹಾಗೆ ಪರಿಹಾರವಿಲ್ಲದ ಸಮಸ್ಯೆಯನ್ನೂ ದೇವನು ಸ್ರಷ್ಟಿಸಿಲ್ಲ. ಯಶಸ್ಸನ್ನರಸಿದ ಪ್ರತಿಯೊಬ್ಬನ ಹಿಂದೆಯೂ ವೇದನಾಜನಕ ಕಥೆಯೊಂದಿರುತ್ತದೆ ಅದೇ ಪ್ರಕಾರ ಪ್ರತಿಯೊಂದು ವೇದನಾಯುಕ್ತ ಕಥೆಯೂ ಯಶಸ್ಸಿನೊಂದಿಗೆ ಅಂತ್ಯಗೊಳ್ಳುತ್ತದೆ ಎಂಬ ನಂಬಿಕೆ ಇಡು. ಕಾಯಿಸಿದ ಸ್ವರ್ಣ ಆಭರಣವಾಗಿ ಬದಲಾಗುತ್ತದೆ.
ಪೆಟ್ಟು ತಿಂದ ತಾಮ್ರ ತಂತಿಯಾಗಿ ರೂಪುಗೊಳ್ಳುತ್ತದೆ ಮತ್ತು ಕೆತ್ತಲ್ಪಟ್ಟ ಶಿಲೆಯು ಶಿಲ್ಪವಾಗುತ್ತದೆ. ಹಾಗಾದರೆ ನೋವು ತಿಂದಷ್ಟೂ ನೀನು ಅಮೂಲ್ಯನಾಗುತ್ತಾ ಹೋಗುವೆ.
ತಪ್ಪು ಸಂಭವಿಸುವುದು ಮನುಷ್ಯ ಸಹಜ . ತಪ್ಪು ಸಂಭವಿಸಿದ ಕ್ಷಣ ಬಹಳ ಖೇದ ಉಂಟಾಗುತ್ತದೆ ಆದರೆ ಒಂದು ಹಂತದಲ್ಲಿ ಇದೇ ತಪ್ಪುಗಳು ವಿಜಯದತ್ತ ಸಾಗಿಸುವ ಅನುಭವ ಜ್ಞಾನವಾಗಿರುತ್ತದೆ.
ನೀನು ವ್ಯಾಕುಲನಾದಾಗ ಜೀವನ ನಿನ್ನನ್ನು ಗೇಲಿಮಾಡಿ ನಗುತ್ತದೆ. ನಿನ್ನನ್ನು ಸಂತ್ರಪ್ತನಾಗಿ ಕಂಡಾಗ ಜೀವನ ಮಂದಹಾಸ ಬೀರುತ್ತದೆ. ಆದರೆ ನೀನು ಇತರರನ್ನು ಸಂತೋಷ ಪಡಿಸಿದರೆ ಜೀವನ ನಿನ್ನನ್ನು ಅಬಿವಂದಿಸುತ್ತದೆ.
ಒಂದು ಸುದವಕಾಶವು ಕೈ ಚೆಲ್ಲಿತೆಂದು ಕಣ್ಣಲ್ಲಿ ನೀರು ತುಂಬಿಕೊಳ್ಳಬೇಡ, ಇತರ ಉತ್ತಮ ಅವಕಾಶಗಳೂ ಕಾಣದೆ ಹೋಗಬಹುದು.

الجمعة، 6 فبراير 2009

ವ್ಯಕ್ತಿ ಮತ್ತು ಆತನ ಪ್ರಭು



ಮನುಷ್ಯನ ತನ್ನ ಸ್ರಷ್ಟಿಕರ್ತನೊಂದಿಗಿರುವ ಸಂಬಂಧವು ಏಕದೇವತ್ವದ ಸಂದೇಶವನ್ನು ಸಾರುವ "ಲಾ ಇಲಾಹ ಇಲ್ಲಲ್ಲಾಹು" ಎಂಬ ಪವಿತ್ರ ವಚನದ ಆಧಾರದ ಮೇಲೆ ನಿಂತಿದೆ. ಇದರ ಅರ್ಥ ಅಲ್ಲಾಹನ ಹೊರತು ಆರಾಧನೆಗೆ ಅರ್ಹ ಯಾರೂ ಇಲ್ಲ ವೆಂದಾಗಿರುತ್ತದೆ. ವ್ಯಕ್ತಿಯು ತನ್ನ ಪ್ರಭುವಿಗೆ ತೋರುವ ವಿಧೇಯತೆಯು ಎಲ್ಲ ಸಮಯ ಮತ್ತು ಎಲ್ಲ ಕೆಲಸ ಕಾರ್ಯಗಳಲ್ಲಿ ಪ್ರಕಟವಾಗಬೇಕು. ಕೇವಲ ಅವನನ್ನು ಮಾತ್ರ ಸರ್ವಾಧಿಕಾರಿಯನ್ನಾಗಿ ಅಂಗೀಕರಿಸಬೇಕು, ಅವನ ಮೇಲೆ ಭರವಸೆಯಿಡಬೇಕು, ಅವನನ್ನು ಭಯ ಪಡಬೇಕು, ಅವನೆಡೆಗೆ ಮರಳುವವನಾಗಿರಬೇಕು, ಅವನ ನಿಯಮವನ್ನು ಜಾರಿ ಗೊಳಿಸಬೇಕು, ಅವನ ಧರ್ಮವನ್ನು ಸಂಸ್ಥಾಪಿಸಬೇಕು. ಇವುಗಳೆಲ್ಲ ವ್ಯಕ್ತಿಯ ಸಂಬಂಧವನ್ನು ಆತನ ಪ್ರಭುವಿನೊಂದಿಗೆ ಗಟ್ಟಿಯಾಗಿಸುತ್ತದೆ. ಮತ್ತು ಅಲ್ಲಾಹನ ಮುಂದೆ ಆತನ ಶರಣಾಗತಿಯ ಪ್ರಮಾಣವನ್ನು ವ್ಯಕ್ತವಾಗಿಸುತ್ತದೆ.

ಆರಾಧನೆಗಳು ಆತ್ಮವನ್ನು ಸಂಸ್ಕರಿಸುತ್ತದೆ ಮತ್ತು ಅದನ್ನು ನಿರ್ಮಲಗೊಳಿಸುತ್ತದೆ. ತೆರೆಯಲ್ಲಿಯೂ ಮರೆಯಲ್ಲಿಯೂ ಅಲ್ಲಾಹನ ಸ್ಮರಣೆ ಅವನನ್ನು ದುಷ್ಕರ್ಮಗಳಿಂದ ತಡೆದು ನಿಲ್ಲಿಸುತ್ತದೆ ಹಾಗೂ ಸತ್ಕರ್ಮಗಳನ್ನು ಮಾಡಲು ಪ್ರೇರೇಪಿಸುತ್ತದೆ. ಇದು ಸಮಾಜದ ಸ್ಥಿರತೆಗೆ ಕಾರಣವಾಗುತ್ತದೆ. ಮಾತ್ರವಲ್ಲ ಇದು ಸಮಾಜದಲ್ಲಿ ಸಮಾನತೆ, ನ್ಯಾಯ, ಪ್ರಾಮಾಣಿಕತೆ, ನಿಷ್ಠೆ, ಸತ್ಯಸಂಧತೆ, ಹಿರಿಮೆ, ಹೊಂದಾಣಿಕೆ ಮತ್ತು ತ್ಯಾಗಗಳಂತಹ ಉತ್ತಮ ಆದರ್ಶಗಳನ್ನು ವ್ರದ್ಧಿಸಲೂ ಕಾರಣವಾಗುತ್ತದೆ. ಹೀಗೆ ವ್ಯಕ್ತಿ ಮತ್ತು ಆತನ ಪ್ರಭುವಿನ ಮಧ್ಯೆ ಸಂಬಂಧ ಗಟ್ಟಿಯಾದಂತೆಲ್ಲಾ ವ್ಯಕ್ತಿ ಮತ್ತು ಸಮಾಜದ ಮಧ್ಯೆ ಸಂಬಂಧವನ್ನು ವ್ರದ್ಧಿಸಲು ವಿಶಾಲ ದಾರಿ ಉಂಟಾಗುತ್ತದೆ.

ಏಕ ದೇವ ವಿಶ್ವಾಸ ಮತ್ತು ಏಕ ದೇವೋಪಾಸನೆಯೇ ಈ ಸಂಬಂಧಕ್ಕೆ ಅಡಿಪಾಯ ವಾಗಿರುತ್ತದೆ

الأحد، 1 فبراير 2009

?ಜೀವನವೇನು

ಜೀವನವೇನು ?
ಅದು ಬಿಡಿಸಲಾಗದ ಒಗಟು
ಮೃದುವಾಗಿದ್ದೂ ಬಲು ಒರಟು
ಜೀವನವೇನು ?
ಅದು ಕಡಲಾಚೆಯ ಸುಂದರ ದ್ವೀಪ
ಅದು ಕಾಣದ, ನೌಕೆಯ ಲೋಪ
ಜೀವನವೇನು ?
ಅರಳಿದರೆ ಅದು ಹೂಗಳ ಪರಿಮಳ
ಕೆರಳಿದರೆ ಅದು ಕ್ಲೇಷಗಳಂಗಳ
ಜೀವನವೇನು ?
ಹಿಗ್ಗಿದರೆ ಅದು ಗಣನಾತೀತ
ಕುಗ್ಗಿದರೆ ಅದು ಉಸಿರಿಗೆ ಸೀಮಿತ
ಜೀವನವೇನು ?
ಕರಗಿದರೆ ಅದು ಬಾಷ್ಪದ ಹನಿಗಳು
ಮೆರೆದರೆ ಅದು ಸಾಗರ ಅಲೆಗಳು
ಜೀವನವೇನು ?
ಅದು ಆಸೆ, ಬಯಕೆಗಳ ಬಿಡಾರ
ಅದು ಸುಖ, ಸಂತೋಷದ ಆಗರ
ಜೀವನವೇನು ?
ಅದು ಚಿಂತೆ, ವ್ಯಥೆಗಳ ಬೀಡು
ಅದು ಶೋಕತಪ್ತರ ನಾಡು
ಜೀವನವೇನು ?
ಅದು ಬೆಳದಿಂಗಳ ಬೆಳಕು
ಅದು ತಾರೆಗಳ ಥಳಕು
ಜೀವನವೇನು ?
ಅದು ನಿರೀಕ್ಷೆಯ ಯಾತನೆ
ಅದು ವಿರಹದ ವೇದನೆ
ಜೀವನವೇ ನಾ ನಿನ್ನ ಅರಿಯದಾದೆ
ನನ್ನನ್ನು ಅಗಲಿ ನೀ ಎಲ್ಲಿ ಮರೆಯಾದೆ